ಮೈಸೂರು: ಆಧುನೀಕ ಕಾಲಕಟ್ಟದಲ್ಲಿ ಶಿಕ್ಷಣ ಕ್ಷೇತ್ರವು ಕೇವಲ ಅಂಕಗಳಿಕೆಗೆ ಸೀಮಿತವಾಗದೇ, ಶಿಕ್ಷಣ ರಾಜಕೀಯ, ಆಡಳಿತಾಹಿ ವ್ಯವಸ್ಥೆ ದೂರವಿದ್ದು, ಮಾನವ ಕುಲಕ್ಕೆ ಮಾನವೀಯತೆ ಕಲಿಸಿ ಪ್ರಕೃತಿ ನಿಯಮದಂತೆ ಜೀವನ ಮಾರ್ಗ ನಡೆಸುವ ಸಾಧನವಾಗಬೇಕು. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಡಳಿತದಲ್ಲಿರುವ ಸರ್ಕಾರಗಳು ತಮ್ಮ ಸಿದ್ಧಾಂತವನ್ನು ಪಠ್ಯದಲ್ಲಿ ಹೇರುವ ಕೆಲಸ ನಿಷೇಧವಾಗಬೇಕು. ಪಠ್ಯಕ್ರಮ ಪರಿಷ್ಕರಣೆ ಆಡಳಿತ ವ್ಯವಸ್ಥೆಗೆ ಸೀಮಿತವಾಗಬಾರದು. ಪ್ರತ್ಯೇಕವಾಗಿ ಸಮಿತಿ ರಚನೆ ಮಾಡಬೇಕು. ನಾನು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಗಣಿತ ಮತ್ತು ವಿಜ್ಞಾನ ಪುಸ್ತಕಗಳನ್ನು ತಂದೆ ಇದಕ್ಕೆಸಾಕಷ್ಟು ವಿರೋಧವಾಯಿತು ಎಂದು ತಿಳಿಸಿದರು.
ಶಾಸಕರು ತಮ್ಮ ಕ್ಷೇತ್ರದಲ್ಲಿ ಹೊಸ ಕಾಮಗಾರಿಗೆ ೨ ಕೋಟಿ ರೂ.ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಿಯೋಗ ಮಾಡಲು ಅವಕಾಶ ಇರಲಿಲ್ಲ. ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಶೇ.3೦ ರಷ್ಟು ಅನುದಾನವನ್ನು ಶಾಲೆ ದುರಸ್ಥಿ ಮತ್ತು ಮೂಲ ಸೌಕರ್ಯಕ್ಕೆ ಕಡ್ಡಾಯವಾಗಿ ಖರ್ಚು ಮಾಡಬೇಕು ಎಂದು ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.
ಆದರೆ, ಶಾಲೆಯ ಮುಖ್ಯೋಪಾಧ್ಯಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿರುವ ಮೂಲ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಿಗೆ ಬೇಡಿಕೆಗಳನ್ನು ಸಲ್ಲಿಸುತ್ತಿಲ್ಲ. ಇದರಿಂದ ಇನ್ನೂ ಅನೇಕ ಶಾಲೆಗಳಿಗೆ ಮೂಲ ಸೌಕರ್ಯವಿಲ್ಲದೆ ಸೊರಗುತ್ತಿವೆ. ನಿರಂತರವಾಗಿ ಮೂರು ವರ್ಷದಿಂದ ಬಂದ ಪೂರ್ಣ ಪ್ರಮಾಣದ ಅನುದಾನವನ್ನು ನನ್ನ ಕ್ಷೇತ್ರದ ಶಿಕ್ಷಣ ಇಲಾಖೆಗೆ ಕೊಟ್ಟಿದ್ದೇನೆ. ಕೆಲವೇ ವರ್ಷಗಳಲ್ಲಿ ನನ್ನ ಕ್ಷೇತ್ರದ ಎಲ್ಲ ಶಾಲೆಗಳಿಗೆ ಸವಲತ್ತುಗಳು ಸಿಗಲಿವೆ ಎಂದರು.
ಶಿಕ್ಷಣದ ಜೊತೆಗೆ ಮೌಲ್ಯ ಕಲಿಸಿ: ಪಾಲಕರಿಗಿಂತ ಹೆಚ್ಚಿನ ಸಮಸ್ಯೆಯನ್ನು ಮಕ್ಕಳು ಶಿಕ್ಷಕರೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ಕೇವಲ ಶಿಕ್ಷಣದಿಂದ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಪಠ್ಯದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳ ಜೀವನಕ್ಕೆ ಪೋಷಣೆ ಮಾಡುವ ಸಂಸ್ಥೆಗಳು ಇಂದು ಹೆಚ್ಚಿನ ಅಗತ್ಯವಿದೆ. ಇದಕ್ಕಾಗಿ ಶಿಕ್ಷಕರು ಮಕ್ಕಳ ಪೋಷಕರೊಂದಿಗೆ ಸಮಾಲೋಚನೆ ನಡೆಸುವ ಪದ್ಧತಿ ಜಾರಿಗೆ ತರಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಅವರು ಮಾತನಾಡಿ, ಶಿಕ್ಷಣ ಎಂಬುದು ಎಲ್ಲರ ವಿಮೋಚನಾ ಅಸ್ತ್ರ. ನನ್ನ ಮೊದಲ ಗುರು ನನ್ನ ತಾತ . ಕನ್ನಡ ಓದಲು ಬರೆಯಲು ಕಾರಣ ಅವರೇ. ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತ, ಆರೋಗ್ಯ ಸುಧಾರಿಸುವ ವೈದ್ಯರು ಮತ್ತು ಬಾಳಿಗೆ ಬೆಳಕಾಗುವ ಶಿಕ್ಷಕರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರು ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಿಸಬೇಕು. ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದು, ಮೀಸಲಾತಿ ಜಾರಿಯಾದ ನಂತರ ಹುದ್ದೆಗಳನ್ನು ತುಂಬುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನನ್ನ ವಿದ್ಯಾರ್ಜನೆಗೆ ಸಣ್ಣಪ್ಪ ಎಂಬ ಶಿಕ್ಷಕರು ನೆರವಾದರು. ಮನೆಯಲ್ಲಿ ಕಷ್ಟವಿದ್ದ ಸಂದರ್ಭದಲ್ಲಿ ಶಾಲಾ ಶುಲ್ಕ ಕಟ್ಟಲಾಗದೆ ವಿದ್ಯಾಭ್ಯಾಸ ನಿಲ್ಲಿಸುವಾಗ ಸಣ್ಣಪ್ಪ ಮೇಷ್ಟ್ರ ಶಾಲೆ ಶುಲ್ಕ ಕಟ್ಟಿ ಓದಿಸಿದರು. ಈಗ ನಾನು ಸಮಾಜದಲ್ಲಿ ಒಳ್ಳೆಯ ಸ್ಥಾನಕ್ಕೆ ಬಂದಿದ್ದೇನೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು ಎಂದಿದ್ದರು. ಈ ಮಾತನ್ನು ಶಿಕ್ಷಕರು ಅನುಷ್ಠಾನಕ್ಕೆ ತರಲು ಉತ್ತಮ ಶಿಕ್ಷಣ ನೀಡಬೇಕು. ಐಎಎಸ್,ಕೆಎಎಸ್ ಸೇರಿ ಉನ್ನತ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಏರಿಸುವುದು ಶಿಕ್ಷಕರೇ ಎನ್ನುವುದನ್ನು ಮರೆಯಬಾರದು. ಶಿಕ್ಷಕರು ಶಿಕ್ಷಣದ ಜೊತೆಗೆ ಸಂಸ್ಕೃತಿ ಕಲಿಸುತ್ತಾರೆ. ಮಕ್ಕಳ ಮೊಬೈಲ್ ಬಳಕೆಯನ್ನು ಬಿಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಸೋಮೇಗೌಡ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.